• ಹಕ್ಕಿ ಹಾರುತಿದೆ ನೋಡಿದಿರಾ? - ಕವನ ವಾಚನ
    Jan 31 2021

    ಇರುಳಿರಳಳಿದು ದಿನದಿನ ಬೆಳಗೆ 

    ಸುತ್ತಮುತ್ತಲೂ ಮೇಲಕೆ ಕೆಳಗೆ

    ಗಾವುದ ಗಾವುದ ಗಾವುದ ಮುಂದಕೆ 

    ಎವೆ ತೆರೆದಿಕ್ಕುವ ಹೊತ್ತಿನ ಒಳಗೆ

    ಹಕ್ಕಿ ಹಾರುತಿದೆ ನೋಡಿದಿರಾ? 

    - ದ.ರಾ.ಬೇಂದ್ರೆ 

    ಕವನ ಸಂಕಲನ: ಗರಿ (೧೯೩೨) 

    https://archive.org/details/dli.osmania.4412/page/n186/mode/1up 

    https://sallaap.blogspot.com/2009/06/blog-post_24.html?m=1 

    https://www.youtube.com/watch?v=3ryNlk1gup0 

    https://www.youtube.com/watch?v=CLhB53mj5Wc

    Show More Show Less
    2 mins
  • ನಿಮ್ಮೊಡನಿದ್ದೂ ನಿಮ್ಮಂತಾಗದೆ - ಕವನ ವಾಚನ
    Nov 19 2020

    ನಿಮ್ಮೊಡನಿದ್ದೂ ನಿಮ್ಮಂತಾಗದೆ

    ಜಗ್ಗಿದ ಕಡೆ ಬಾಗದೆ

    ನಾನು ನಾನೇ ಆಗಿ. ಈ ನೆಲದಲ್ಲೆ ಬೇರೊತ್ತಿದ್ದರೂ ಬೀಗಿ

    ಪರಕೀಯನಾಗಿ

    ತಲೆಯೆತ್ತುವುದಿದೆ ನೋಡಿ

    ಅದು ಬಲುಕಷ್ಟದ ಕೆಲಸ.

     

    ವೃತ್ತದಲ್ಲಿ ಉನ್ಮತ್ತರಾದ

    ನಿಮ್ಮ ಕುಡಿತ ಕುಣಿತ ಕೂಟಗಳು

    ಕೆಣಕಿ ಎಸೆದಿದ್ದರೂ

    ಪಂಚೇಂದ್ರಿಯಕ್ಕೆ ಲಗಾಮು ಜಡಿದು ಜಾರದೆ ನಿಮ್ಮತ್ತ

    ಸಂಯಮವನ್ನೇ ಪೋಷಿಸಿ ಸಾಕುತ್ತ

    ರೇಖೆಯಲ್ಲೇ ದೊಂಬರಾಟ ನಡೆಸುವುದಿದೆ ನೋಡಿ

    ಅದು ಬಲು ಕಷ್ಟದ ಕೆಲಸ.

     

    ಒಳಗೊಳಗೆ ಬೇರುಕೊಯ್ದು

    ಲೋಕದೆದುರಲ್ಲಿ ನೀರು ಹೊಯ್ದು

    ನನ್ನ ಸಲಹುವ ನಿಮ್ಮ ಕಪಟ ಗೊತ್ತಿದ್ದರೂ

    ಗೊತ್ತಿಲ್ಲದಂತೆ ನಟಿಸಿ

    ಚಕಾರವೆತ್ತದೆ ನಿಮ್ಮೊಡನೆ ಕಾಫಿಹೀರಿ ಪೇಪರೋದಿ ಹರಟಿ

    ಬಾಳ ತಳ್ಳುವುದಿದೆ ನೋಡಿ

    ಅದು ಬಲು ಕಷ್ಟದ ಕೆಲಸ.

     

    ನಿಮ್ಮ ಮಾತುಕತೆಗಳಲ್ಲಿ ಹುದುಗಿದ ಬೆಕ್ಕು

    ಸಂಶಯದ ಪಂಜವೆತ್ತಿ

    ನನ್ನ ನಂಬಿಕೆ ನೀಯತ್ತು ಹಕ್ಕು

    ಕೊನೆಗೆ ಸಾಚಾತನವನ್ನು ಪರಚಿ, ಒತ್ತಿ

    ನೋವಿಗೆ ಕಣ್ಣು ತುಂಬಿದ್ದರೂ,

    ಚೆಲ್ಲಿದ ರಕ್ತದಲ್ಲಿ ರಾಷ್ಟ್ರೀಯತೆಯ ಧಾತುಗಳ

    ನನ್ನದುರಿನಲ್ಲೇ ತನಿಖೆಮಾಡುವ ಕ್ಷಣವನ್ನು

    ಹುಸಿನಗುತ್ತ ಎದುರಿಸುವುದಿದೆಯಲ್ಲ

    ಅದು ಬಲು ಕಷ್ಟದ ಕೆಲಸ.

     

    -ಕೆ ಎಸ್ ನಿಸಾರ್ ಅಹಮದ್.

    ಕವನ ಸಂಕಲನ: ಸಂಜೆ ಐದರ ಮಳೆ.


    https://sites.google.com/site/kavanasangraha/Home/nisaar-ahamad/samje-aidara-male

    https://ruthumana.com/2020/05/04/poetry-reading-k-s-nisar-ahamed/

    https://www.youtube.com/watch?v=XfOZy918lCk

    Show More Show Less
    2 mins
  • ಮಾತು ಮುತ್ತು - ಕವನ ವಾಚನ
    Nov 18 2020

    ಮಾತು ಬರುವುದು ಎಂದು ಮಾತಾಡುವುದು ಬೇಡ;

    ಒಂದು ಮಾತಿಗೆ ಎರಡು ಅರ್ಥವುಂಟು.

    ಎದುರಿಗಿರುವವ ಕೂಡ ಮಾತ ಬಲ್ಲವ ಗೆಳೆಯ;

    ಬರಿದೆ ಆಡುವ ಮಾತಿಗರ್ಥವಿಲ್ಲ.

     

    ಕಡಲ ತಟಿಯಲಿ ತರುಣ ಬಲೆಯ ಬೀಸಿದ್ದಾನೆ;

    ಮೀನು ಬೇಳುವ ತನಕ ಕಾಯ ಬೇಕು.

    ಮೀನ ಹೊರೆಯನು ಹೊತು ಮನೆಗೆ ಬಂದಿದ್ದಾನೆ;

    ಹುಡುಕುತ್ತಲಿಹನವನು ಮುತ್ತಿಗಾಗಿ.

     

    ಮಾತು ಮುತ್ತೆನ್ನುವುದು ಬಲ್ಲವರ ಉಕ್ತಿ; ಬಿಡು.

    ಮೀನಿನಿಂದಲು ನಮಗೆ ಲಾಭವುಂಟು.

    ಮುತ್ತ ಹುಡುಕಲು ಹೋಗಿ ಮೀನತಂದಿದ್ದಾನೆ.

    ಅವನ ದುಡಿಮೆಗೆ ಕೂಡ ಅರ್ಥವುಂಟು.

     

    ಮನೆಗೆ ಬಂದಾಗವನ ಮಡದಿ ಮೆಲ್ಲನೆ ನಕ್ಕು

    ಮುತ್ತಕೊಟ್ಟಳು ಅವನ ಹಸಿದ ತುಟಿಗೆ.

    ಹೃದಯವನು ಕಲಕಿತ್ತು ಅವಳ ಮೌನದ ಮುತ್ತು.

    ಮುತ್ತು ಸಿಕ್ಕಿತು ಎಂದು ನಕ್ಕವನು.

    - ಕೆ ಎಸ್ ನರಸಿಂಹಸ್ವಾಮಿ

    ಕವನ ಸಂಕಲನ: ನವಿಲದನಿ


    https://sites.google.com/site/kavanasangraha/Home/ksn/naviladani

    Show More Show Less
    2 mins
  • ರಾಮನ್ ಸತ್ತ ಸುದ್ದಿ - ಕವನ ವಾಚನ
    Nov 17 2020

    ರಾಮನ್ ಸತ್ತ ಸುದ್ದಿ ಓದಿದ ಬೆಳಿಗ್ಗೆ ಶಿವಮೊಗ್ಗೆಗೆ

    ದರಿದ್ರ ಥಂಡಿ; ಅಸ್ತಿತ್ವದ ಅಸ್ಪಷ್ಟ ಜಿಜ್ಞಾಸೆ, ಗುರುತಿಸಲಾಗದ

    ಕಸಿವಿಸಿ, ಮುಜುಗರ ತಾಳದೆ ವಾಕಿಂಗ್ ಹೊರಟೆ; ಬೀದಿ-

    ಗದೇ ಮಾಮೂಲು ಭಂಗಿ; ಯಾರೂ ದುಃಖಿಸುತ್ತಿಲ್ಲವೆನ್ನಿಸಿ

    ದುಃಖವಾಯಿತು. ಮೈಲಿಗೆ

    ಪರಿಚಿತ ಸಿಕ್ಕಿದ್ದು ನವುಲೆ ಗ್ರಾಮದ ಹನುಮ;


    ಯಾರದೋ ಗದ್ದೆಯಲ್ಲಿ ಗೇಯುವ, ಮೋಟು ಬೀಡಿಯ

    ಕಿವಿಗೆ ಸಿಕ್ಕಿಸಿಕೊಳ್ಳುವ, ತೊಡೆಯ ಪರಪರ ಕೆರೆದುಕೊಳ್ಳುವ,

    ಹಳ್ಳಿಯೇ ಹನುಮಿಸಿದಂತೆ ನನಗೆ ಭಾಸವಾಗುವ ವಿಚಿತ್ರ-

    ಅಭ್ಯಾಸರೂಪಿತ ನಿರ್ದಿಷ್ಟ ಅಳತೆಯ ನಿರ್ವಿವಿಧ ಕೂಗಿಂದ

    ಹಕ್ಕಿಗಳ ಅಟ್ಟುತಿದ್ದ; ಪಾತಿ ಸರಿಗೊಳಿಸುತಿದ್ದ; ಅಪ್ರಚಲಿತ

    ಹಳ್ಳಿಪದದ ಅಶಾಸ್ತ್ರೀಯ ಮಟ್ಟನ್ನು ಕುರುಕುತಿದ್ದ.

    ಕಂಡೊಡನೆ, ’ಹ್ಯಾಂಗಿದೀರಿ’ ಅಂದ;


    ಈಚೀಚೆಗೆ ಅಪರೂಪವಲ್ಲ ಅಂದ, ಯಾಕೋ ಬಡವಾಗಿದ್ದೀರಿ

    ಅಂದ, ಮಳೆ ಬೇಕಾಗಿಲ್ಲ ಅಂದ, ಫಸಲನ್ನು ಅಂದಾಜಿಸಿದ,

    ನೆರೆಯವರೊಡನೆ ದಿನವಹಿ ಕಾದಾಟ ಸಾಕಾಗಿದೆ ಮಾರಾಯರೇ

    ಅಂದ-ಕೊರೆಯುತ್ತಲೇ ಇದ್ದ-ಹೂಂಗುಟ್ಟಿದೆ-

    ಅವನ ಮಾತಿಗೆ ಮಂಜಿನೊಳಗಿನ ಸೂರ್‍ಯ ನನ್ನ ಪ್ರಜ್ಞೆ.

    ’ರಾಮನ್ ಸತ್ತರೋ ಹನುಮ’ ಅನ್ನಬೇಕು, ಆಗ ತಡೆದು

    ಸುಮ್ಮನಾದೆ. ರಾಮನ್ ಅರ್ಥೈಸಿಕೊಳ್ಳಬಹುದೆ ಇವನ

    ಅಶಿಕ್ಷಿತ ಅರಿವಿಗೆ?


    - ಕೆ. ಎಸ್. ನಿಸಾರ್ ಅಹಮದ್

    ಸಂಕಲನ : ನಾನೆಂಬ ಪರಕೀಯ (1972)


    https://www.sallapa.com/2013/11/blog-post_21.html

    https://imgur.com/a/ymp0xQI

    https://ruthumana.com/2020/05/04/poetry-reading-k-s-nisar-ahamed/

    https://www.youtube.com/watch?v=QGNPwtk4be4

    https://www.google.com/books/edition/KANNADA_NANNA_BARAHA_NANNA_AAYKE/BXiLAwAAQBAJ


    Show More Show Less
    5 mins
  • ಎಲ್ಲಿ ಮನಕಳುಕಿರದೋ - ಕವನ ವಾಚನ
    Nov 16 2020

    ಎಲ್ಲಿ ಮನಕಳುಕಿರದೋ ಎಲ್ಲಿ ತಲೆ ಬಾಗಿರದೋ
    ಎಲ್ಲಿ ತಿಳಿವಿಗೆ ತೊಡಕು ತೋರದಿಹುದಲ್ಲಿ
    ಎಲ್ಲಿ ಮನೆಯೊಕ್ಕಟ್ಟು ಸಂಸಾರ ನೆಲೆಗಟ್ಟು
    ಧೂಳೊಡೆಯದಿಹುದೋ ತಾನಾನಾಡಿನಲ್ಲಿ
    ಎಲ್ಲಿ ಸತ್ಯದಗಾಧ ನೆಲೆಯಿಂದ ಸವಿವಾತು
    ಸಲ್ಲಲಿತ ನಡೆಯಿಂದ ಮುಂಬರಿವುದಲ್ಲಿ
    ಎಲ್ಲಿ ದಣಿವಿರದ ಸಾಧನೆಯು ಸಫಲತೆಗೆಡೆಗೆ
    ತೋಳ ನೀಡಿಹುದೋ ತಾನಾನಾಡಿನಲ್ಲಿ
    ಎಲ್ಲಿ ಸುವಿಚಾರ ನಿರ್ಮಲ ಜಲದೊಸರು ಹರಿದು
    ಕಾಳರೂಢಿಯ ಮರಳೊಳಿಂಗಿ ಕೆಡದಲ್ಲಿ
    ಎಲ್ಲಿ ನೀನೆಮ್ಮ ಚಿಂತನವನುದ್ಯಮವ ಸುವಿ-
    -ಶಾಲತೆಯ ಪೂರ್ಣತೆಗೆ ಮುಂಬರಿಸುವಲ್ಲಿ
    ಅಲ್ಲಿಯಾ ಬಂಧನ ರಹಿತ ಸುಖದ ಸ್ವರ್ಗದಲಿ
    ಪಾಲಿಸೈ ಪಿತ ನಮ್ಮ ನಾಡೆಚ್ಚರಿರಲಿ !
    - ಕನ್ನಡಾನುವಾದ: ಎಂ.ಎನ್ ಕಾಮತ್ 


    ಎಲ್ಲಿ ಮನವು ನಿರ್ಭಯದಿ ತಲೆಯನೆತ್ತಿ ನಿಲುವುದೋ
    ಎಲ್ಲಿ ಜ್ಞಾನ ಸುಧಾಪಾನ ಎಲ್ಲರಿಗೂ ಸಿಗುವುದೋ
    ಎಲ್ಲಿ ಮನೆಯು ಅಡ್ಡಗೋಡೆ ಇಲ್ಲದೆ ವಿಶಾಲವೋ
    ಎಲ್ಲಿ ಮಾತು ಸತ್ಯದಾಳದಿಂದ ಹೊಮ್ಮಿ ಬರುವುದೋ
    ಎಲ್ಲಿ ಸತತ ಕರ್ಮ ಪೂರ್ಣಸಿದ್ಧಿ ಪಡೆದು ಮೆರೆವುದೋ
    ಎಲ್ಲಿ ತಿಳಿವು ಕಟ್ಟಳೆಯ ಮಳಲ ತೊರೆದು ಹರಿವುದೋ
    ಎಲ್ಲಿ ನೀನು ನಮಗೆ ಧೈರ್ಯ ಎಲ್ಲಿ ನೀನು ನಮಗೆ ಸ್ಥೈರ್ಯ
    ವರವಿಕಾಸಗೊಳಿಸಿ ಸದಾ ಅಭ್ಯುದಯವ ಕೋರುವೆಯೋ
    ಆ ಸ್ವತಂತ್ರ ಸ್ವರ್ಗಕೆ ನಮ್ಮ ನಾಡು ಏಳಲೇಳಲೇಳಲೇಳಲೇಳಲೇಳಲಿ
    - ಕನ್ನಡಾನುವಾದ: ಪ್ರೊ. ವೇಣುಗೋಪಾಲ್


    https://bit.ly/2IKeV1l

    https://www.youtube.com/watch?v=zvYszBKo_D4

    https://www.youtube.com/watch?v=nsSoY2qIz44

    https://rbalu.com/a-new-beginning/

    https://parashuramakalappanagoji.blogspot.com/2019/05/blog-post_7.html

    https://soundcloud.com/maithreyi-karnoor/pallavi-recites-my-kannada-translation-of-tagores-where-the-mind-is-without-fear

    Show More Show Less
    3 mins
  • ಹಣತೆ - ಕವನ ವಾಚನ
    Nov 15 2020

    ಈ ಮುರುಕು ಗುಡಿಸಲಲಿ

    ಕಿರಿಹಣತೆ ಬೆಳಗುತಿದೆ

    ಧ್ಯಾನಸ್ಥಯೋಗಿಯೊಲು ಸ್ತಿಮಿತವಾಗಿ !

    ಬಡವರಾತ್ಮದ ಹಣತೆ

    ಇಂತೆ ಬೆಳಗುವುದಲ್ತೆ

    ಅಜ್ಞಾತವಾಸದಲಿ ದೀನವಾಗಿ.

    ಅಲ್ಲಿ ಸೌಧಗಳಲ್ಲಿ

    ಬೀದಿ ಸಾಲುಗಳಲ್ಲಿ

    ಮಿಂಚುಸೊಡರುಗಳೆನಿತೊ ಶೋಭಿಸಿರೆ ಕೋಟಿ.

    ಧ್ಯಾನಗಾಂಭೀರ್ಯದಲಿ

    ಮತ್ತೆ ಸರಳತೆಯಲ್ಲಿ

    ಯಾವುದೀ ಬಡಗುಡಿಲ ಸೊಡರುರಿಗೆ ಸಾಟಿ ?

    ಯಾವ ಚಂದ್ರಾದಿತ್ಯ ತಾರೆಗಳಿಗಿದು ಹೀನ,

    ಇಲ್ಲಿ ಬೆಳಗುತ್ತಿರುವ ಹಣತೆಗಿಹ ಸ್ಥಾನ ?

    ಸೂರ್ಯನೋ ಹಿರಿಸೊಡರು ಭುವನ ಭವನಕ್ಕೆ

    ಹಣತೆಯೋ ಕಿರಿಸೊಡರು ಮಣ್ಣು ಗುಡಿಸಲ್ಗೆ.

    ಯಾವ ಚಿತ್‌ಶಕ್ತಿಯದು

    ಸೂರ್ಯನಲಿ ಬೆಳಕಾಗಿ

    ತಾರೆಯಲಿ ಹೊಳಪಾಗಿ

    ಬೆಂಕಿಯಲಿ ಬಿಸಿಯಾಗಿ ಪ್ರವಹಿಸಿಹುದೋ,

    ಆ ದಿವ್ಯಶಕ್ತಿಯೇ ಈ ಮಣ್ಣ ಹಣತೆಯಲಿ

    ಹರಿಯುತಿರೆ, ಕಿರಿಹಣತೆ ಕಿರಿದಾದರೇನು ?

    ಬೆಳಕ ಬೀರುವ ಶಕ್ತಿ ಹಿರಿದಲ್ಲವೇನು ?


    - ಜಿ.ಎಸ್.ಎಸ್. ಶಿವರುದ್ರಪ್ಪ

    ಕವನ ಸಂಕಲನ: ಸಾಮಗಾನ 

    https://parashuramakalappanagoji.blogspot.com/2018/11/blog-post.html

    Show More Show Less
    2 mins
  • ದೀಪಾವಳಿ - ಕವನ ವಾಚನ
    Nov 14 2020

    ಹೂವು ಬಳ್ಳಿಗೆ ದೀಪ ;
    ಹಸಿರು ಬಯಲಿಗೆ ದೀಪ ;
    ಹುಲಿಯ ಕಣ್ಣಿನ ದೀಪ ಕಾಡಿನಲ್ಲಿ ;
    ಮುತ್ತು ಕಡಲಿಗೆ ದೀಪ,
    ಹಕ್ಕಿ ಗಾಳಿಗೆ ದೀಪ,
    ಗ್ರಹತಾರೆಗಳ ದೀಪ ಬಾನಿನಲ್ಲಿ.

    ಬಲ್ಮೆ ತೋಳಿಗೆ ದೀಪ ;
    ದುಡಿಮೆ ಬೆವರಿನ ದೀಪ ;
    ಸಹನೆ ಅನುಭವ - ದೀಪ ಬದುಕಿನಲ್ಲಿ ;
    ಮುನಿಸು ಒಲವಿಗೆ ದೀಪ ;
    ಉಣಿಸು ಒಡಲಿಗೆ ದೀಪ ;
    ಕರುಣೆ ನಂದಾದೀಪ ಲೋಕದಲ್ಲಿ.

    ತೋರಣದ ತಳಿರಲ್ಲಿ,
    ಹೊಸಿಲ ಹಣತೆಗಳಲ್ಲಿ,
    ಬಾಣಬಿರುಸುಗಳಲ್ಲಿ ನಲಿವು ಮೂಡಿ,
    ಕತ್ತಲೆಯ ಪುಟಗಳಲಿ
    ಬೆಳಕಿನಕ್ಷರಗಳಲಿ,
    ದೀಪಗಳ ಸಂದೇಶ ಥಳಥಳಿಸಲಿ !

    ಬೆಳಕಿನಸ್ತಿತ್ವವನೆ
    ಅಣಕಿಸುವ ಕತ್ತಲೆಗೆ
    ತಕ್ಕ ಉತ್ತರವಲ್ಲಿ ಕೇಳಿಬರಲಿ !
    ದೀಪಾವಳಿಯ ಜ್ಯೋತಿ
    ಅಭಯ ಹಸ್ತವನೆತ್ತಿ
    ಎಲ್ಲರಿಗೆ ಎಲ್ಲಕ್ಕೆ ಶುಭಕೋರಲಿ !

    ಕವನ ಸಂಕಲನ: ನವ ಪಲ್ಲವ

    ಕವಿ: ಡಾ.ಕೆ.ಎಸ್.ನರಸಿಂಹಸ್ವಾಮಿ.‎

    https://sites.google.com/site/kavanasangraha/Home/ksn/nava-pallava

    Show More Show Less
    2 mins
  • ನನ್ನ ಹಣತೆ - ಕವನ ವಾಚನ
    Nov 13 2020

    ಹಣತೆ ಹಚ್ಚುತ್ತೇನೆ ನಾನೂ,
    ಈ ಕತ್ತಲನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ;
    ಲೆಕ್ಕವೇ ಇರದ ದೀಪಾವಳಿಯ ಹಡಗುಗಳೆ
    ಇದರಲ್ಲಿ ಮುಳುಗಿ ಕರಗಿರುವಾಗ
    ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ,

    ಹಣತೆ ಹಚ್ಚುತ್ತೇನೆ ನಾನೂ;
    ಈ ಕತ್ತಲಿನಿಂದ ಬೆಳಕಿನ ಕಡೆಗೆ ನಡೆದೇನೆಂಬ
    ಆಸೆಯಿಂದಲ್ಲ.
    ಕತ್ತಲಿನಿಂದ ಕತ್ತಲೆಗೇ ತಡಕಾಡಿಕೊಂಡು ಬಂದಿವೆ ಹೆಜ್ಜೆ
    ಶತಮಾನದಿಂದಲೂ.
    ನಡು ನಡುವೆ ಒಂದಷ್ಟು ಬೆಳಕು ಬೇಕೆಂದು
    ಆಗಾಗ ಕಡ್ಡಿ ಗೀಚಿದ್ದೇವೆ,
    ದೀಪ ಮುಡಿಸಿದ್ದೇವೆ,
    ವೇದ, ಶಾಸ್ತ್ರ, ಪುರಾಣ, ಇತಿಹಾಸ, ಕಾವ್ಯ, ವಿಜ್ಞಾನಗಳ
    ಮತಾಪು-ಪಟಾಕಿ-ಸುರುಸುರುಬತ್ತಿ-ಹೂಬಾಣ
    ಸುಟ್ಟಿದ್ದೇವೆ.
    "ತಮಸೋ ಮಾ ಜ್ಯೋತಿರ್ಗಮಯಾ" ಎನ್ನುತ್ತ ಬರೀ
    ಬೂದಿಯನ್ನೇ ಕೊನೆಗೆ ಕಂಡಿದ್ದೇವೆ.

    ನನಗೂ ಗೊತ್ತು, ಈ ಕತ್ತಲೆಗೆ
    ಕೊನೆಯಿರದ ಬಾಯಾರಿಕೆ
    ಎಷ್ಟೊಂದು ಬೆಳಕನ್ನು ಇದು ಉಟ್ಟರೂ, ತೊಟ್ಟರೂ
    ತಿಂದರೂ, ಕುಡಿದರೂ, ಇದಕ್ಕೆ ಇನ್ನೂ ಬೇಕು
    ಇನ್ನೂ ಬೇಕು ಎನ್ನುವ ಬಯಕೆ.

    ಆದರೂ ಹಣತೆ ಹಚ್ಚುತ್ತೇನೆ ನಾನೂ,
    ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ,
    ಇರುವಷ್ಟು ಹೊತ್ತು ನಿನ್ನ ಮುಖ ನಾನು, ನನ್ನ ಮುಖ ನೀನು
    ನೋಡಬಹುದೆಂಬ ಒಂದೇ ಒಂದು ಆಸೆಯಿಂದ;
    ಹಣತೆ ಆರಿದ ಮೇಲೆ, ನೀನು ಯಾರೋ, ಮತ್ತೆ
    ನಾನು ಯಾರೋ.

    - ಜಿ.ಎಸ್.ಎಸ್. ಶಿವರುದ್ರಪ್ಪ

    ಕವನ ಸಂಕಲನ: ಗೋಡೆ (1972)

    https://parashuramakalappanagoji.blogspot.com/2018/11/blog-post.html

    Show More Show Less
    2 mins